Search




Newsletter


 

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣೀ ಸಭೆಗೆ ಭರದ ಸಿದ್ಧತೆ

ಉದ್ಯಾನ ನಗರಿ ಬೆಂಗಳೂರು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧಿವೇಶನಕ್ಕೆ ಉತ್ಸಾಹದಿಂದ ಸಜ್ಜುಗೊಂಡಿದೆ. ಸಪ್ತಂಬರ್ ೧೨ರಿಂದ ೧೪ರ ವರೆಗೆ ನಡೆಯಲಿರುವ ಈ ಅಧಿವೇಶನದಲ್ಲಿ ಭಾಗವಹಿಸಲಿರುವ ದೇಶದೆಲ್ಲೆಡೆಯಿಂದ ಬರುವ ಪ್ರತಿನಿಧಿಗಳನ್ನು ಸ್ವಾಗತಿಸಲು ಇಡೀ ನಗರವನ್ನೇ ಕಾರ್ಯಕರ್ತರು ಸಿಂಗರಿಸಿದ್ದಾರೆ.

ದಕ್ಷಿಣಭಾರತದಲ್ಲಿ ಮೊದಲಬಾರಿಗೆ ಬಿಜೆಪಿ ಅಧಿಕಾರಕ್ಕೇರಿರುವ ಕರ್ನಾಟಕದ ರಾಜಧಾನಿಯಲ್ಲಿ ಭಾಜಪದ ಈ ಮಹತ್ವದ ಸಭೆ ನಡೆಯಲಿರುವುದು ವಿಶೇಷವೆನಿಸಿದೆ. ನಗರದಾದ್ಯಂತ ಬಿಜೆಪಿ ದ್ವಜಗಳು, ಸ್ವಾಗತ ಕೋರುವ ಬ್ಯಾನರ್‌ಗಳೂ ಕಟ್ಟಲ್ಪಟ್ಟಿವೆ. ರೈಲ್ವೆನಿಲ್ದಾಣ ಮತ್ತು ಏರ್‌ಪೋರ್ಟ್ ನಿಂದ ಅಧಿವೇಶನ ನಡೆಯುವ ರೆಸಿಡೆನ್ಸಿ ರಸ್ತೆಯ ವುಡ್ ಲಾಂಡ್ಸ ಹೋಟೆಲ್ ವರೆಗಿನ ಎಲ್ಲಾ ವೃತ್ತಗಳೂ ಬಂಟಿಗ್ಸ್ ಮತ್ತು ದ್ವಜಗಳಿಂದ ಅಲಂಕೃತಗೊಂಡಿವೆ. ಹೈಟೆಕ್ ಸಿಟಿಯಾದ ಬೆಂಗಳೂರಿನ ಹಿರಿಮೆಗೆ ತಕ್ಕಂತೆ ಅಧಿವೇಶನವೂ ಅಧುನಿಕ ತಂತ್ರಜ್ಞಾನವನ್ನು ಜೊತೆಗೂಡಿಸಿಕೊಂಡಿದೆ. ಭವ್ಯ ಸುಸಜ್ಜಿತ ವೇದಿಕೆಯ ಜೊತೆಗೆ ಕ್ಷಣಕ್ಷಣದ ಸುದ್ದಿಗಳನ್ನು ಮಾಧ್ಯಮಗಳಿಗೆ ತಲುಪಿಸಲು ಕಂಪ್ಯೂಟರ್ ಮತ್ತು ಇತರೆ ಸಂಪರ್ಕ ಸಾಧನಗಳಿಂದ ಸುಸಜ್ಜಿತವಾದ ಮೀಡಿಯಾ ಸೆಂಟರ್ ಅನ್ನು ಸಹ ಸಿದ್ಧಮಾಡಲಾಗಿದೆ. ಅನೇಕ ರಾಷ್ಟ್ರೀಯ ನಾಯಕರು ಈಗಾಗಲೇ ಆಗಮಿಸಿದ್ದು, ಹೋಟೆಲ್ ವುಡ್ ಲ್ಯಾಂಡ್ಸ್ ಸೇರಿದಂತೆ ಅನೇಕ ಕಡೆಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದಿನ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿ 4 ಗಂಟೆಗೆ ಮೀಡಿಯಾ ಸೆಂಟರ್ ಉದ್ಘಾಟನೆಯನ್ನು ಆಯೋಜಿಸಲಾಗಿದೆ. ಸಂಜೆ ನಗರಕ್ಕೆ ಆಗಮಿಸಲಿರುವ ಶ್ರೀ ಎಲ್ ಕೆ ಅಡ್ವಾಣಿಯವರಿಗೆ ಮತ್ತು ಶ್ರೀ ರಾಜನಾಥ್ ಸಿಂಗ್ ಅವರಿಗೆ ವಿಮಾನ ನಿಲ್ದಾಣದಲ್ಲಿ ಭವ್ಯಸ್ವಾಗತ ನೀಡಲು ಮತ್ತು ಅಧಿವೇಶನದವರೆಗೆ ಬೃಹತ್ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲು ಕಾರ್ಯಕರ್ತರು ಕಾದಿದ್ದಾರೆ.