Search




Newsletter

Your email:

 

ರಾಜ್ಯ ಇತಿಹಾಸ

ಡಾ| ಶಾಮಪ್ರಸಾದ್ ಮುಖರ್ಜಿ ಅವರು ಸ್ಥಾಪಿಸಿದ ಭಾರತೀಯ ಜನಸಂಘ ಕರ್ನಾಟಕದಲ್ಲಿ ಪ್ರಸಿದ್ಧವಾಗುತ್ತಿತ್ತು. ದೇಶದಲ್ಲಿ ಕಾಂಗ್ರೆಸ್ ಏಕೈಕ ರಾಜಕೀಯ ಪಕ್ಷವಾಗಿದೆ ಎಂದು ಭಾವಿಸಿದ್ದ ಜನ ಸಾಮಾನ್ಯರು ಹಾಗೂ ವಿಚಾರವಂತರು ಪಕ್ಷವನ್ನು ಗುರುತಿಸಲು ಆರಂಭಿಸಿದರು. ಶ್ರೇಷ್ಠ ವಾಗ್ಮಿ ಕರ್ನಾಟಕ ಕೇಸರಿ ಶ್ರೀ ಜಗನ್ನಾಥ ರಾವ್ ಜೋಷಿ ಮೊದಲಾದ ನಾಯಕರು  ಕರ್ನಾಟಕದ ಪ್ರತಿ ಜಿಲ್ಲೆಗೂ ಭೇಟಿ ನೀಡಿ ಜನರನ್ನು ತಮ್ಮ ಆಕರ್ಷಕ ಮಾತುಗಳಿಂದ ಪ್ರೇರೇಪಿಸಿದರು. ಅವರ ಮಾತನ್ನು ಕೇಳಲು ಎಲ್ಲಾ ಪಕ್ಷದ ಜನರೂ ಬರುತ್ತಿದ್ದರು. ಹರಿಕಥೆಯನ್ನು ಕೇಳಲು ಬಂದವರಂತೆ ಅವರ ಭಾಷಣ ಕೇಳಲು ಬಂದ ಜನ ಎಷ್ಟೇ ಹೊತ್ತಾದರೂ ಕಾಯುತ್ತಿದ್ದರು. ಅವರು ಜನರಲ್ಲಿ ರಾಷ್ಟ್ರಭಕ್ತಿಯನ್ನು ಬಡಿದೆಬ್ಬಿಸಿದರು. ಕಾಂಗ್ರೆಸ್ಸಿನ ದುರಾಡಳಿತದಿಂದಾಗಿ ದೇಶಕ್ಕಾಗುವ ನಷ್ಟಗಳನ್ನು ಅವರು ವಿವರಿಸುತ್ತಿದ್ದರು. ಈ ಮೂಲಕ ಜನಸಂಘವನ್ನು ಪ್ರಖ್ಯಾತಗೊಳಿಸಿದ ಅವರು, ಪಕ್ಷವನ್ನು ಸಂಘಟಿಸಲು ಹಾಗೂ ಬಲಗೊಳಿಸಲು ಕಾರಣವಾದರು.

ಅವರ ಸಮರ್ಥ ಮಾರ್ಗದರ್ಶನದಲ್ಲಿ, ಅನುಭವಿ ಸಂಘ ಪ್ರಚಾರಕರಾಗಿದ್ದ ಶ್ರೀ ಬಾಬು ರಾವ್ ದೇಶಪಾಂಡೆ ಅವರು ಸಂಘಟನಾ ಕಾರ್ಯದರ್ಶಿಗಳಾದರು. ಅವರ ಸಂಘಟನಾ ಸಾಮರ್ಥ್ಯ ಮತ್ತು ವೈಚಾರಿಕ ಹಿರಿತನ ಅನೇಕ ವಿಚಾರವಂತರನ್ನು ಮತ್ತು ಪ್ರಭಾವೀ ವ್ಯಕ್ತಿಗಳನ್ನು ಪಕ್ಷಕ್ಕೆ ಸೆಳೆಯಲು ಸಹಕಾರಿಯಾಯಿತು. ಹಿರಿಯರೊಂದಿಗೆ ಹಿರಿಯರಾಗಿ, ಕಿರಿಯರೊಂದಿಗೆ ಕಿರಿಯರಾಗಿ ಬೆರೆತ ಅವರು ತಮ್ಮ ಸರಳ ಜೀವನದಿಂದ ಇತರರಿಗೆ ಮಾದರಿಯಾಗಿದ್ದರು.

ಶ್ರೀ ಎ ಕೆ ಸುಬ್ಬಯ್ಯ ಅವರು ವಿಧಾನ ಸಭೆಯಲ್ಲಿ ತಮ್ಮ ಅನುಭವ ಹಾಗೂ ಪ್ರೇರಣಾದಾಯೀ ಮಾತುಗಳಿಂದ ಪಕ್ಷದ ಬೆಳವಣಿಗೆಗೆ ಕಾರಣವಾದರು.  ಡಾ| ಕೆ. ಎಸ್ ದತ್ತಾತ್ರಿ, ಶ್ರೀ ವರದರಾಜ ಶೆಟ್ಟಿ, ಶ್ರೀ ಮಲ್ಲಿಕಾರ್ಜುನಯ್ಯ, ಶ್ರೀ ಕರ್ಮಬಲ್ಲಿ ಸಂಜೀವ ಶೆಟ್ಟಿ, ಡಾ| ವಿ ಎಸ್ ಆಚಾರ್ಯ ಹಾಗೂ ಶ್ರೀ ಡಿ ಎಚ್ ಸಾಕಾರಮೂರ್ತಿ ಮೊದಲಾದವರು ಪಕ್ಷದ ಬೆಳವಣಿಗೆಗೆ ಕಾರಣರಾದರು.

1980ರಲ್ಲಿ ಪಕ್ಷವು ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಎಂಬ ಹೊಸ ರೂಪದೊಂದಿಗೆ ಹೊರಹೊಮ್ಮಿದಾಗ, ಲಾಲ್ ಬಾಗಿನ ರಜತ ಮಹೋತ್ಸವ ಸಭಾಂಗಣದಲ್ಲಿ ಸೇರಿದ ನಾಯಕರು, ಶ್ರೀ ಎ ಕೆ ಸುಬ್ಬಯ್ಯ ಅವರನ್ನು ಅಧ್ಯಕ್ಷರನ್ನಾಗಿ ಆರಿಸಿದರು. ಬಿಜೆಪಿಯ ಸಿದ್ಧಾಂತಕ್ಕೆ ಹೆಚ್ಚು ಹೆಚ್ಚು ಯುವಕರು ಆಕರ್ಷಿತರಾದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅನೇಕ ಸ್ವಯಂಸೇವಕರು ಪಕ್ಷಕ್ಕಾಗಿ ದುಡಿಯಲು ಆರಂಭಿಸಿದರು. ಬಿಜೆಪಿಯು ಯುವಕರ ಪಕ್ಷವೆಂದು ಕರೆಯಲ್ಪಡಲು ಆರಂಭವಾಯಿತು. ಮುಂದೆ ಶ್ರೀ ಅಟಲ್ ಬಿಹಾರಿ ವಾಜಪೇಯಿ, ಶ್ರೀ ಲಾಲ್ ಕೃಷ್ಣ ಅಡ್ವಾಣಿ, ಡಾ| ಮುರಳೀ ಮನೋಹರ ಜೋಷಿ, ಶ್ರೀ ಜಗನ್ನಾಥ ರಾವ್ ಜೋಷಿ ಮುಂತಾದ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ವೇಗವಾಗಿ ಬೆಳೆಯಿತು.